ಮಂಗಳೂರು, ಅ.25: ಮುಂದಿನ ವರ್ಷ ಮಂಗಳೂರಿನ ಹಜ್ಜ್ ಕೇಂದ್ರವನ್ನು ಇನ್ನಷ್ಟು ಸುಸಜ್ಜಿತ ಕೇಂದ್ರವಾಗಿ ಪರಿವರ್ತಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕರಾವಳಿ ಪ್ರದೇಶ, ಮಲೆನಾಡು ಹಾಗೂ ಉತ್ತರ ಕೇರಳದ ಹಜ್ಜ್ ಯಾತ್ರಾರ್ಥಿಗಳಿಗೆ ಮಂಗಳೂರು ಕೇಂದ್ರದ ಮೂಲಕ ಹಜ್ಜ್ ಯಾತ್ರೆ ಕೈಗೊಳ್ಳಲು ವ್ಯವಸ್ಥೆ ಕಲ್ಪಿಸುವುದಾಗಿ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಭರವಸೆ ನೀಡಿದ್ದಾರೆ.
ರವಿವಾರ ಮಂಗಳೂರಿನಿಂದ ನೇರವಾಗಿ ಹಜ್ಜ್ ಯಾತ್ರೆ ಕೈಗೊಳ್ಳುವ ಪ್ರಥಮ ತಂಡದ ಬೀಳ್ಕೊಡುಗೆ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಹಲವಾರು ಧರ್ಮಗಳ ನಂಬಿಕೆಗಳ ಸಂಗಮವಾದ ಭಾರತದಲ್ಲಿ ಪ್ರತಿಯೊಬ್ಬ ಪ್ರಜೆಯೂ ತನ್ನ ಧಾರ್ಮಿಕ ವಿಧಿಗಳನ್ನು ನಿರ್ವಹಿಸಲು ಅವಕಾಶ ಕಲ್ಪಿಸಲು ಭಾರತ ಸರಕಾರ ಕಟಿಬದ್ಧವಾಗಿದೆ. ಕೇಂದ್ರ ಸರಕಾರವು ಭಾರತ ದೇಶದ ಮುಸ್ಲಿಂ ಬಾಂಧವರ ಭಾವನೆಗಳಿಗೆ ಮತ್ತು ಅವರ ಧಾರ್ಮಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರಾಮುಖ್ಯವನ್ನು ನೀಡುತ್ತಾ, ಅವರ ಪವಿತ್ರ ಹಜ್ಜ್ ಯಾತ್ರೆಗೆ ಭಾರತದಲ್ಲಿ ಮತ್ತು ಸೌದಿ ಅರೇಬಿಯ ದೇಶದಲ್ಲಿ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಿಕೊಡುತ್ತಿದೆ. ಈ ನಿಟ್ಟಿನಲ್ಲಿ ವಿದೇಶಾಂಗ ಸಚಿವಾಲಯ, ನಾಗರಿಕ ವಿಮಾನಯಾನ ಮಂತ್ರಾಲಯ, ಸೌದಿ ಅರೇಬಿಯದಲ್ಲಿನ ದೂತಾವಾಸಗಳು,
ಸರಕಾರದ ಸಂಸ್ಥೆಗಳು, ಕೇಂದ್ರದ ಮತ್ತು ರಾಜ್ಯಗಳ ಹಜ್ಜ್ ಸಮಿತಿಗಳು, ಹಜ್ಜ್ ಯಾತ್ರೆಗೆ ಉತ್ತಮ ಸವಲತ್ತುಗಳನ್ನು ನೀಡುತ್ತಿವೆ. ಜೊತೆಗೆ ಜಿದ್ದಾ, ಮಕ್ಕಾ, ಮುಕರ್ರಮ, ಮದೀನ ಮುನವ್ವರ ಹಾಗೂ ಮಿನಾ-ಅರಫಾದಲ್ಲಿ ಹಜ್ಜ್ ಯಾತ್ರಿಗಳಿಗೆ ಸವಲತ್ತುಗಳನ್ನು ಒದಗಿಸಲು ಶ್ರಮಿಸುತ್ತಿವೆ ಎಂದು ಕೃಷ್ಣ ಹೇಳಿದರು.
ಹಜ್ಜ್ ಯಾತ್ರಾರ್ಥಿಗಳಿಗೆ ಉತ್ತಮ ಸವಲತ್ತುಗಳನ್ನು ನೀಡುವ ಗುರಿಯೊಂದಿಗೆ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು, ನಾಗರಿಕ ವಿಮಾನ ಯಾನ ಮಂತ್ರಾಲಯ, ಏರ್ ಇಂಡಿಯಾ ಹಾಗೂ ಹಜ್ಜ್ ಸಮಿತಿಯ ಸದಸ್ಯರು ಸೌದಿ ಅರೇಬಿಯ ದೇಶಕ್ಕೆ ಭೇಟಿ ಕೊಟ್ಟು ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ, ಭಾರತದ ಹಜ್ಜ್ ಯಾತ್ರಿಗಳ ಕ್ಷೇಮ, ಸುರಕ್ಷೆ ಮತ್ತು ಇನ್ನಿತರ ಏರ್ಪಾಡುಗಳ ಬಗ್ಗೆ ಹಲವು
ಸುತ್ತಿನ ಮಾತುಕತೆ ನಡೆಸಿದ್ದಾರೆ.
ಸೌದಿ ಅರೇಬಿಯಾ ದೇಶದಲ್ಲಿ ಹಜ್ಜ್ ಯಾತ್ರಿಗಳ ತಂಗುವಿಕೆಗೆ ಸೂಕ್ತವಾದಂತಹ ಕಟ್ಟಡಗಳ ಆಯ್ಕೆ ಮತ್ತು ಸೌದಿ ಅರೇಬಿಯಾದಲ್ಲಿ ಯಾತ್ರಾರ್ಥಿಗಳ ಪ್ರಯಾಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಲಾಗಿದೆ ಎಂದು ಎಸ್.ಎಂ.ಕೃಷ್ಣ ತಿಳಿಸಿದರು. ಭಾರತದಿಂದ ಹಜ್ಜ್ ಸಮಿತಿಗಳ ಮೂಲಕ ಹೋಗುವ ೧,೧೫,೦೦೦ (ಕರ್ನಾಟಕದಿಂದ ೫,೭೫೭) ಯಾತ್ರಾರ್ಥಿಗಳ ಜೊತೆಗೆ ಖಾಸಗಿ ಟೂರ್ ಆಪರೇಟರ್ಸ್ ಮುಖಾಂತರ ೪೫,೦೦೦ ಯಾತ್ರಾರ್ಥಿಗಳು ಈ ಪವಿತ್ರ ಯಾತ್ರೆಗೆ ತೆರಳಲಿದ್ದಾರೆ. ಈ ಯಾತ್ರೆಗೆ ಒಟ್ಟು ೧೯ ಕೇಂದ್ರ ಗಳಿದ್ದು, ಈ ಬಾರಿ ಹೊಸದಾಗಿ ಕರ್ನಾಟಕ ರಾಜ್ಯದ ಮಂಗಳೂರು, ಜಾರ್ಖಂಡ್ನ ರಾಂಚಿ ಕೇಂದ್ರದಿಂದ ಹೆಚ್ಚುವರಿಯಾಗಿ ವಿಮಾನ ಯಾತ್ರೆಯನ್ನು ಪ್ರಾರಂಭಿಸಲಾಗಿದೆ. ಮಂಗಳೂರು ಕರ್ನಾಟಕ ರಾಜ್ಯದ ಒಂದು ಪ್ರಮುಖ ಮುಸ್ಲಿಂ ಬಾಂಧವರನ್ನು ಒಳಗೊಂಡಂತಹ ಕೇಂದ್ರವಾಗಿರುವುದನ್ನು ಆಧರಿಸಿ ಮತ್ತು ಈ ಭಾಗದ ಎಲ್ಲ ಮುಸ್ಲಿಂ ಬಾಂಧವರ ಆಶಯಕ್ಕೆ ಅನುಗುಣವಾಗಿ ಮಂಗಳೂರಿನಿಂದಲೇ ಹಜ್ಜ್ ಯಾತ್ರಾರ್ಥಿಗಳಿಗೆ
ವಿಮಾನ ಯಾನ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಈ ಬಾರಿ ಮಂಗಳೂರಿನಿಂದ ೭೦೦ ಮಂದಿ ಯಾತ್ರಾರ್ಥಿಗಳು ಹಜ್ಜ್ ಯಾತ್ರೆಗೆ ತೆರಳಲಿದ್ದು, ಮುಂದಿನ ವರ್ಷಗಳಲ್ಲಿ ಇತರ ಕರಾವಳಿ ಪ್ರದೇಶ, ಮಲೆನಾಡಿನ ಯಾತ್ರಾರ್ಥಿಗಳು ಅಲ್ಲದೆ ಉತ್ತರ ಕೇರಳದ ಯಾತ್ರಾರ್ಥಿಗಳು ಕೂಡ ಈ ಕೇಂದ್ರದ ಸವಲತ್ತು ಪಡೆದುಕೊಳ್ಳಬಹುದಾಗಿದೆ ಎಂದು ಸಚಿವ ಎಸ್.ಎಂ. ಕೃಷ್ಣ ನುಡಿದರು.
ಹಜ್ಜ್ ಯಾತ್ರಾರ್ಥಿಗಳಿಗೆ ಅವರ ಪ್ರಯಾಣ, ವಾಸ್ತವ್ಯ, ಸುರಕ್ಷತೆ, ಪ್ರಾರ್ಥನೆ ವಿಷಯಗಳಿಗೆ ಸಂಬಂಧಿಸಿದಂತೆ ಓರಿಯಂಟೇಷನ್, ತರಬೇತಿಯನ್ನು ನೀಡಲಾಗಿದೆ. ಯಾತ್ರಾರ್ಥಿಗಳ ವಾಸ್ತವ್ಯದ ಅವಧಿಯಲ್ಲಿ ಅವರ ಹಣ ಅಥವಾ ಬ್ಯಾಗೇಜ್ ಕಳೆದು ಹೋದಂತಹ ಸಂದರ್ಭದಲ್ಲಿ ಅವರಿಗೆ ಪರಿಹಾರ ನೀಡತಕ್ಕಂತಹ ಕಾರ್ಯಕ್ರಮವನ್ನು ೨೦೦೪ರ ಅವಧಿಯಲ್ಲಿ ಅಳವಡಿಸಿದ್ದು, ಅದನ್ನು ಈ ಸಾಲಿಗೂ ವಿಸ್ತರಿಸಲಾಗಿದೆ. ಯಾತ್ರಾರ್ಥಿಗಳಿಗೆ ಅವರು ವಿಮಾನವೇರುವ ಸ್ಥಳದಲ್ಲಿಯೇ ಭಾರತದ ಕರೆನ್ಸಿಯ ಬದಲಾಗಿ ಸೌದಿ ರಿಯಾಲ್ಗಳನ್ನು ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಈ ಬಾರಿಯ ಯಾತ್ರಾರ್ಥಿಗಳಿಗೆ ಅಂತಾರ್ರಾಷ್ಟ್ರೀಯ ಪಾಸ್ ಪೋರ್ಟ್ ನೀಡುವುದು ಮತ್ತು ಸ್ವೈನ್ಫ್ಲೂ ಖಾಯಿಲೆಗಳನ್ನು ನಿಗ್ರಹಿಸುವುದು ಈ ಬಾರಿ ನಮಗೆ ಎದುರಾದ ಎರಡು ಹೊಸ ಸವಾಲುಗಳು. ಈ ದಿಸೆಯಲ್ಲಿ ನಾವು ಕಾರ್ಯೋನ್ಮುಖರಾಗಿದ್ದು, ಯಾವುದೇ ಸಮಸ್ಯೆಯನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ಸೌದಿ ಅರೇಬಿಯಾದಲ್ಲಿರುವ ಮೆಡಿಕಲ್ ಮಿಷನ್ ಈ ದಿಶೆಯಲ್ಲಿ ಸನ್ನದ್ಧವಾಗಿದೆ ಎಂದು ಸಚಿವ ಕೃಷ್ಣ ಹೇಳಿದರು.
ರಿಯಾದ್ನಲ್ಲಿರುವ ಭಾರತ ದೂತಾವಾಸ ಮತ್ತು ಜಿದ್ದಾದಲ್ಲಿನ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾಗಳಿಗೆ ಸೌದಿ ಅರೇಬಿಯಾ ದೇಶದಲ್ಲಿ ಹಜ್ಜ್ ಯಾತ್ರಾರ್ಥಿಗಳ ವ್ಯವಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಡಲಾಗಿದೆ. ಒಂದು ವೇಳೆ ಯಾತ್ರಾರ್ಥಿಗಳಿಗೆ ಸೌದಿ ಅರೇಬಿಯಾ ದೇಶದಲ್ಲಿ ತೊಂದರೆ ಅಥವಾ ಅನಾನುಕೂಲಗಳು ಉಂಟಾದಲ್ಲಿ ತಕ್ಷಣವೇ ಜಿದ್ದಾ, ಮಕ್ಕಾ ಮುಕರ್ರಮ, ಮದೀನಾ ಮುನವ್ವರ, ಮಿನಾ, ಅರಫಾಗಳಲ್ಲಿ ಇರುವಂತಹ ಭಾರತದ ದೂತಾವಾಸದ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಈಗಾಗಲೇ ಕೇಂದ್ರ ಸರಕಾರ ೩೦೦ ಖಾದಿಮುಲ್ ಹುಜ್ಜಾಜ್ ಮತ್ತು ೬೦೦ ಆಡಳಿತ ಹಾಗೂ ವೈದ್ಯಕೀಯ ಸಿಬ್ಬಂದಿಗಳನ್ನು ಯಾತ್ರಾರ್ಥಿಗಳ ಸುರಕ್ಷತೆ ಮತ್ತು ಅನುಕೂಲಕ್ಕಾಗಿ ನಿಯೋಜಿಸಿದೆ.
ಧಾರ್ಮಿಕ ಹಜ್ಜ್ ಯಾತ್ರಾ ಅವಧಿಯಲ್ಲಿ ಶಾಂತಿ, ಸಹನೆ ಮತ್ತು ಸೌಹಾರ್ದತೆಯನ್ನು ಪ್ರದರ್ಶಿಸುವವರಾಗಬೇಕು. ವಿಶೇಷವಾಗಿ ಜಮ್ರತ್ನಲ್ಲಿ ಕಲ್ಲು ತೂರುವ ಸಂದರ್ಭದಲ್ಲಿಅತ್ಯಂತ ಹೆಚ್ಚಿನ ಜನಸ್ತೋಮವಿದ್ದು, ಸುರಕ್ಷತೆಯ ಬಗ್ಗೆ ಹೆಚ್ಚಿನ ಜಾಗರೂಕತೆ ವಹಿಸಬೇಕು. ಹಜ್ಜ್ ಪ್ರಾರ್ಥನೆ ಸಂದರ್ಭ ದೇಶದ ಒಳಿತಿಗಾಗಿ, ಶಾಂತಿ, ಅಭಿವೃದಿಟಛಿಗಾಗಿ ಅಲ್ಲಾಹನಲ್ಲಿ ಪ್ರಾರ್ಥಿಸ
ಬೇಕು ಎಂದು ಸಚಿವ ಎಸ್.ಎಂ. ಕೃಷ್ಣ ಕರೆ ನೀಡಿದರು. ಉಳ್ಳಾಲ ಖಾಝಿ ತಾಜುಲ್ ಉಲಮಾ ಅಸಯ್ಯದ್ ಅಬ್ದುರ್ರಹ್ಮಾನ್ ಅಲ್ ಬುಖಾರಿ ಕುಂಞಿಕೋಯ ತಂಳ್ ದುಆ ನೆರವೇರಿಸಿ ದರು. ಈ ಸಂದರ್ಭದಲ್ಲಿ ಉಡುಪಿ ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್ ಉಪಸ್ಥಿತ ರಿದ್ದರು. ಸಮಾರಂಭದಲ್ಲಿ ಮಾಜಿ ಸಚಿವರಾದ ಆಸ್ಸರ್ ಫೆರ್ನಾಂಡೀಸ್, ಜನಾರ್ದನ ಪೂಜಾರಿ, ವಸಂತ ಸಾಲ್ಯಾನ್, ನಾಗರಾಜ ಶೆಟ್ಟಿ, ಬಿ.ಎ. ಮೊದಿನ್, ರಾಜ್ಯ ಹಜ್ಜ್ ಕಮಿಟಿ ಅಧ್ಯಕ್ಷ ಮುಹಮ್ಮದ್ ಗೌಸ್, ಶಾಸಕರಾದ ಅಭಯಚಂದ್ರ ಜೈನ್, ರಮಾನಾಥ ರೈ, ಯು.ಟಿ.ಖಾದರ್, ಮಾಜಿ ಶಾಸಕರಾದ ವಿಜಯ ಕುಮಾರ್ ಶೆಟ್ಟಿ, ಕೆ.ಎಂ. ಇಬ್ರಾಹೀಂ, ಮಾಜಿ ಸಂಸದ ವಿನಯ ಕುಮಾರ್ ಸೊರಕೆ, ರಾಜ್ಯ ಅಲ್ಪಸಂಖ್ಯಾತರ ಅಭಿವೃದಿ ನಿಗಮದ ಅಧ್ಯಕ್ಷ ಎನ್.ಬಿ. ಅಬೂಬಕರ್, ಹಜ್ಜ್ ಕ್ಯಾಂಪ್ ಅಧ್ಯಕ್ಷ ವೈ. ಮುಹಮ್ಮದ್ ಕುಂಞಿ, ಉಪಾಧ್ಯಕ್ಷರಾದ ಬಿ.ಎ.ಮೊದಿನ್ ಬಾವಾ ಮತ್ತು ಅಝೀಝ್ ಬೈಕಂಪಾಡಿ, ಪ್ರಧಾನ ಕಾರ್ಯದರ್ಶಿ ಹಾಜಿ ಎಸ್.ಎಂ. ರಶೀದ್, ಉಳ್ಳಾಲ ದರ್ಗಾ ಅಧ್ಯಕ್ಷ ಯು.ಕೆ. ಮೋನು,
ಬಜ್ಪೆ ಮಸೀದಿಯ ಖತೀಬ್ ಅಬೂಸುಫ್ಯಾನ್ ಮದನಿ, ಯೆನೆಪೋಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೈ. ಅಬ್ದುಲ್ಲ ಕುಂಞಿ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ. ಬಾವಾ ಮತ್ತು ವಿ. ಮುಹಮ್ಮದ್, ಕೇಂದ್ರ ನಾರು ಅಭಿವೃದಿಟಛಿ ಮಂಡಳಿ ಸದಸ್ಯ ಟಿ.ಎಂ. ಶಹೀದ್, ಮಂಗಳೂರು ಹಜ್ಜ್ ಕ್ಯಾಂಪ್ನ ಪ್ರಧಾನ ಕಾರ್ಯದರ್ಶಿ ಎಸ್.ಎಂ. ರಶೀದ್ ಹಾಜಿ ಉಪಸ್ಥಿತರಿದ್ದರು.